ನಾಗಲಾಪುರ -
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಒಂದು ಗ್ರಾಮ. ಮಾಯಸಂದ್ರದಿಂದ ಸುಮಾರು 8 ಕಿ.ಮೀ. ದಕ್ಷಿಣಕ್ಕಿದೆ. ಇದು ಹೊಯ್ಸಳರ ಕಾಲದ ಒಂದು ಅಗ್ರಹಾರ. ಇತರ ಹೊಯ್ಸಳ ಅಗ್ರಹಾರಗಳಂತೆ ಇಲ್ಲಿಯೂ ಊರ ನಡುವೆ ಒಂದು ವಿಷ್ಣುದೇವಾಲಯವಿದೆ. ಅದರ ಈಶಾನ್ಯಕ್ಕೆ ಒಂದು ಶಿವಾಲಯ ಹಾಗೂ ಅದರ ಮುಂದೆ ಒಂದು ಕೆರೆ ಇದೆ.

ಇಲ್ಲಿರುವ ಚೆನ್ನಕೇಶವ ಮತ್ತು ಕೇದಾರೇಶ್ವರ ದೇವಾಲಯಗಳೆರಡೂ ಒಂದೇ ವಿನ್ಯಾಸದ, ಪೂರ್ಣವಿಕಾಸಗೊಂಡ ಹೊಯ್ಸಳ ಶೈಲಿಯವು. ಇವುಗಳ ಕಾಲ ಸುಮಾರು 13ನೆಯ ಶತಮಾನ. ಈಗ ಇವು ಶಿಥಿಲವಾಗಿವೆ. ಎರಡೂ ದೇವಾಲಯಗಳು ನಕ್ಷತ್ರಾಕಾರದ ತಳವಿನ್ಯಾಸದ ಎತ್ತರವಾದ ಜಗತಿಗಳ ಮೇಲಿವೆ. ಹೊರಗೋಡೆಯ ಮೇಲೆ ಬುಡದಿಂದ ಕ್ರಮವಾಗಿ ಆನೆ, ಕುದುರೆ, ಬಳ್ಳಿಸುರುಳಿ, ಮಕರ, ಹಂಸಗಳ ಪಟ್ಟಿಕೆಗಳಿವೆ. ನಡುವಿನ ಪಟ್ಟಿಕೆಯ ಮೇಲೆ ಯಾವ ಕಂಡರಣೆಯೂ ಇಲ್ಲ. ಕೇಶವ ದೇವಾಲಯದ ನವರಂಗದ ನಾಲ್ಕು ಕಂಬಗಳು ನಾಜೂಕಾಗಿ ಕೆತ್ತಿರುವ ಶಿಲ್ಪಗಳಿಂದ ಕೂಡಿದೆ. ಈ ದೇವಾಲಯದ ಹೊರಗೋಡೆಯ ಮೇಲೆ 32 ಪುರುಷ ಹಾಗೂ 35 ಸ್ತ್ರೀ ವಿಗ್ರಹಗಳಿವೆ. ಈ ಶಿಲ್ಪಗಳಲ್ಲಿ ಪರವಾಸುದೇವ, ನರಸಿಂಹ, ವರಾಹ, ಲಕ್ಷ್ಮೀನಾರಾಯಣ, ವೇಣುಗೋಪಾಲ, ವಿಠಲ, ಹಯಗ್ರೀವ, ಬ್ರಹ್ಮ, ಗರುಡ, ಗಣಪತಿ ದಕ್ಷಿಣಾಮೂರ್ತಿ, ಇಂದ್ರ - ಶಚಿ, ಲಕ್ಷ್ಮಿ, ದುರ್ಗಾ, ಸರಸ್ವತಿ, ಮೋಹಿನಿ, ಮಹಿಷಾಸುರಮರ್ದಿನಿ ಮೊದಲಾದವು ಮುಖ್ಯವಾದವು. ಚೆನ್ನಕೇಶವನ ಮೂಲವಿಗ್ರಹ ಈಗ ಇಲ್ಲಿ ಇಲ್ಲ. ಇಲ್ಲಿರುವುದು ವಿಜಯನಗರ ಕಾಲದ 11/2 ಮೀ. ಎತ್ತರದ ಶ್ರೀನಿವಾಸ ವಿಗ್ರಹ.

ಕೇದಾರೇಶ್ವರ ದೇವಾಲಯ ಕೇಶವ ದೇವಾಲಯದಂತೆಯೇ ಪೂರ್ವಾಭಿಮುಖವಾಗಿದ್ದರೂ ಇದರ ದ್ವಾರ ದಕ್ಷಿಣಕ್ಕಿದೆ. ಇಲ್ಲಿಯ ಕಂಬ ಹಾಗೂ ಭುವನೇಶ್ವರಿ ಕೇಶವ ದೇವಾಲಯದವಕ್ಕಿಂತ ಸುಂದರವಾಗಿದೆ. ಗರ್ಭಗೃಹ ಹಾಗೂ ಸುಕನಾಸಿಯ ಚಾವಣಿಯಲ್ಲಿ ತಾಂಡವೇಶ್ವರ ಶಿಲ್ಪವಿದೆ. ನವರಂಗದಲ್ಲಿ ನಾಲ್ಕು ಕೈಗಳಿರುವ ಬ್ರಹ್ಮ, ನಾರಾಯಣ ಹಾಗೂ ಸೂರ್ಯ ವಿಗ್ರಹಗಳಿವೆ. ಹೊರಗೋಡೆಯ ಮೇಲೆ ಕೇಶವ ದೇವಾಲಯದಲ್ಲಿಯಂತೆಯೇ ವಿವಿಧ ಶಿಲ್ಪಗಳಿವೆ. ಇಲ್ಲಿ 38 ಪುರುಷ ಹಾಗೂ 39 ಸ್ತ್ರೀ ವಿಗ್ರಹಗಳಿವೆ. ಇವುಗಳಲ್ಲಿ ಏಳು ಶಿಲ್ಪಗಳ ಮೇಲೆ 13ನೆಯ ಶತಮಾನದ ಲಿಪಿಯಲ್ಲಿ ಸೀಚೋಜನ ಮಗ ಬೈಚೋಜ ಎಂಬ ಶಿಲ್ಪಿಯ ಹೆಸರಿದೆ. ಈ ಲೇಖ ಸಾಮಾನ್ಯವಾಗಿ ಇರುವಂತೆ ವಿಗ್ರಹದ ಪೀಠದಲ್ಲಿ ಇರದೆ ಶಿಲ್ಪದ ಲೋವೆಯ ಮೇಲಿದೆ. ಹೊರಗೋಡೆಯ ಶಿಲ್ಪಗಳಲ್ಲಿ ಪತ್ನೀಸಮೇತರಾಗಿ ವಾಹನಾರೂಢರಾಗಿರುವ ದಿಕ್ಪಾಲಕರ ವಿಗ್ರಹಗಳನ್ನು ಆಯಾ ದಿಕ್ಕಿಗೆ ಕೆತ್ತಿರುವುದು ಗಮನಾರ್ಹ. ದೇವಾಲಯದ ಒಳಗೆ ಇತ್ತೀಚೆಗೆ ಕಡೆದ ಕೆಲವು ವಿಗ್ರಹಗಳಿವೆ. ಒಟ್ಟಿನಲ್ಲಿ ಈ ದೇವಾಲಯಗಳನ್ನು ಹೊಯ್ಸಳ ಶೈಲಿಯ ಉತ್ತಮ ದೇವಾಲಯಗಳ ಪಟ್ಟಿಗೆ ಸೇರಿಸಬಹುದು.					
				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ